ಸೇನವಾರರು
	ಭಾರತದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮಭಾಗದಲ್ಲಿ ಚಿಕ್ಕ ರಾಜ್ಯವನ್ನು ಸ್ಥಾಪಿಸಿ ಆಳಿದ ಒಂದು ಮಾಂಡಲಿಕ ಮನೆತನ. ಈ ಮನೆತನದ ರಾಜರು ಮತ್ತು ಇವರ ಆಳಿಕೆಗೆ ಸಂಬಂಧಿಸಿದಂತೆ ಹೆಚ್ಚು ಮಾಹಿತಿ ದೊರೆಯುವುದಿಲ್ಲ. ಇವರು ಜೈನಧರ್ಮಾವಲಂಬಿಗಳಾಗಿದ್ದರೆಂದು ತಿಳಿದುಬರುತ್ತದೆ. ದೊರೆತಿರುವ ಶಾಸನಗಳಲ್ಲಿ ಇವರನ್ನು ಖಚನ ವಂಶೀಯರೆಂದೂ ಫಣಿಧ್ವಜವುಳ್ಳವ ರೆಂದೂ ಕೂಡಲೂರುಪುರವರಾಧೀಶ್ವರರೆಂದೂ ವರ್ಣಿಸಲಾಗಿದೆ. ಈ ವಂಶದ ಮೊಟ್ಟಮೊದಲನೆಯ ರಾಜ ಚಿತ್ರವಾಹನನೆಂದೂ ಇವರು 690ರಲ್ಲಿ ಆಳುತ್ತಿದ್ದುದಾಗಿಯೂ ತಿಳಿದುಬರುತ್ತದೆ. ಸು.1010ರ ಸುಮಾರಿ ನಲ್ಲಿ ಚಾಳುಕ್ಯ ವಿಕ್ರಮಾದಿತ್ಯನ ಮಾಂಡಲಿಕನಾಗಿ ಸೇನವಾರ ರಾಜನೊಬ್ಬ ಬನವಾಸಿ ಪ್ರಾಂತ್ಯದಲ್ಲಿ ಆಡಳಿತ ನಡೆಸುತ್ತಿದ್ದುದಾಗಿ ಸೊರಬ ತಾಲ್ಲೂಕಿನ ಶಾಸನವೊಂದರಿಂದ ತಿಳಿದುಬರುತ್ತದೆ. 1058ರಲ್ಲಿ ಜೀವಿತನಾಗಿದ್ದ, ಅವನ ಮಗ ಜೀವನವಾಹನ ಮತ್ತು ಅವನ ಮಗ ಮಾರ ಅಥವಾ ಮಾರಸಿಂಹ ಎಂಬುವರು ಆಳಿಕೆ ನಡೆಸಿದುದಾಗಿ ಚಿಕ್ಕಮಗಳೂರು ತಾಲ್ಲೂಕಿನ ಶಾಸನವೊಂದರಿಂದ ತಿಳಿದುಬರುತ್ತದೆ. ಈ ಶಾಸನದಲ್ಲಿ ಮಾರ ಎಂಬುವನು ಹೇಮಕೂಟಪುರದ ಸ್ವಾಮಿ ಎಂಬುದಾಗಿ ವರ್ಣಿಸಲಾ ಗಿದೆ. ಸೇನವಾರ ರಾಜಕುಮಾರರಾದ ಸೂರ್ಯ ಮತ್ತು ಆದಿತ್ಯ ಎಂಬುವರು ಚಾಳುಕ್ಯ ಆರನೆಯ ವಿಕ್ರಮಾದಿತ್ಯನ ಆಸ್ಥಾನದಲ್ಲಿ ವಿಶೇಷ ಸಚಿವರಾಗಿದ್ದರೆಂದು ಮತ್ತೊಂದು ಶಾಸನ ತಿಳಿಸುತ್ತದೆ. ಇವರ ರಾಜ್ಯದ ವಿಸ್ತೀರ್ಣ, ವಂಶಾನುಕ್ರಮಣಿಕೆ, ಕಾಲಾನುಕ್ರಮಣಿಕೆ ಮತ್ತು ಇವರ ಸಾಧನೆಗಳನ್ನು ಕುರಿತಾದ ಸಂಗತಿಗಳು ತಿಳಿದುಬರುವುದಿಲ್ಲ. 								
	(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ